ಅದಿರುಜೋಗರಿಕೆ  (ಪಾರ್ಕಿನ್ಸನ್ನನ ಬೇನೆ)

ಮಿದುಳಿನ ಅರೆಗೋಳಗಳ ನಡುವೆ ಇರುವ ಓಕ್ಕಾಯಿ ಗಾತ್ರದ, ತಳದ ನರಗಂಟುಗಳಲ್ಲಿನ (ಬೇಸಲ್ ಗ್ಯಾಂಗ್ಲಿಯ) ನರಕಣಗಳು ಅನುವಳಿದಿರುವುದರಿಂದ ಹೊರಗಾಣುವ, ಕೈಕಾಲುಗಳು ಅದಿರುವ, ಮೈಬಿಗುಪಿನ ಬೇನೆಯಿದು (ಪಾರ್ಕಿನ್ಸನ್ನನ ಬೇನೆ). ಮೈಯೆಲ್ಲ ಸೆಡೆತುಕೊಂಡು ಅದಿರುವುದು ರೋಗದ ಮುಖ್ಯ ಗುರುತು.
	
ಕಾಲನ್ನು ಎಳೆದೆಳೆವ ನಡಿಗೆ, ಕಾಲು ಭಾರವೆನಿಸಿಕೆ, ಕೈ ಮೆಲ್ಲಗೆ ನಡುಗಿದಂತೆ ಕಾಣುವುದೇ ಅದಿರುಜೋಗರಿಕೆಯ ಮೊದಮೊದಲ ಲಕ್ಷಣಗಳು. ಉಳಿದವು ಒಂದಾದ ಮೇಲೆ ಒಂದರಂತೆ ನಿಧಾನವಾಗಿ ಬರುತ್ತವೆ. ಬರೆವಣಿಗೆ ಕಿರಿಯದಾಗುವುದು. ಕೊನೆಗೆ ಇನ್ನಿತರ ಕೈಚಳಕಗಳು ಇಲ್ಲವಾಗುತ್ತವೆ. ಮಾತು ತೊಡರುತ್ತದೆ. ನುಂಗಣೆ, ಆಹಾರ ಅಗಿಯುವುದೂ ಬಲು ಕಷ್ಟದ ಕೆಲಸವಾಗುತ್ತದೆ. ಸ್ನಾಯುಗಳ ನಿತ್ರಾಣ, ಬಿಗಿತಗಳಿಂದ ನಡಿಗೆ ಇನ್ನೂ ತ್ರಾಸಕರವಾಗುತ್ತದೆ. ಸಮತೋಲ ತಪ್ಪಿ ಬಿದ್ದುಬಿಡುವ ಸಂಭವ ಹೆಚ್ಚು. ಅಡ್ಡಾಡುವುದು ತೀರ ಪೇಚಾಟಕ್ಕಿಟ್ಟುಕೊಂಡು ಕೊನೆಗೆ ಕುರ್ಚಿಯಲ್ಲಿ ಕುಳಿತಲ್ಲಿಂದ, ಹಾಸಿಗೆಯಲ್ಲಿ ಮಲಗಿದಲ್ಲಿಂದ ಏಳುವುದೂ ಆಮೇಲೆ ನಡೆಯುವುದೂ ಶ್ರಮಕರವಾಗುತ್ತದೆ. 
	
ಭಾವತೋರದ ಮುಖ, ಮೊಗವಾಡ ಹಾಕಿದ ಹಾಗೆ ಮುಖವಿರುವುದು. ಹುಬ್ಬುಗಳು ಎತ್ತಿಕೊಂಡಿರುತ್ತವೆ. ಬೆನ್ನು ಗೂನಾಗುತ್ತದೆ. ಮೈ ಮುಂದೆ ಕೈದೋಳುಗಳು ತೂಗುಬಿದ್ದಿರುವುವು. ಕೈಗಳ ಹೆಬ್ಬೆರಳೂ ತೋರುಬೆರಳೂ ಯಾವಾಗಲೂ ಗುಳಿಗೆ ಮಾಡುತ್ತಿರುವಂತೆ, ಸುರುಳಿ ಸುತ್ತುತ್ತಿರುವಂತೆ ಆಡುತ್ತಿರುತ್ತವೆ. ಬರುಬರುತ್ತ ಇದು ಕೈ, ತೋಳು, ಕಾಲುಗಳಿಗೂ ಹಬ್ಬುತ್ತದೆ. ಹೆಜ್ಜೆ ಹಾಕಬೇಕೆಂದರೆ ಮುಂದಕ್ಕೆ ತಳ್ಳಿಸಿಕೊಂಡವನಂತೆ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ನಿಧಾನವಾಗಿ ನಡೆವನು. ರೋಗ ಬಲಿತಿರುವಾಗ, ಏನು ಮಾಡಬೇಕೆಂದರೂ ಶ್ರಮ. ಕೈಕಾಲುಗಳು ತೀರ ಕುಸಿದು ಬೀಳದಿದ್ದರೂ ತನಗೆ ಬೇಕೆನಿಸಿದ್ದನ್ನು ಮಾಡಲು ಕೈಲಾಗದ ಹೆಳವನಾಗುತ್ತಾನೆ. ಆದರೂ ಸರಕ್ಕನೆ ಇದ್ದಕ್ಕಿದ್ದಂತೆ ಉದ್ವೇಗದಿಂದ ಕೆಲವು ಕೆಲಸಗಳನ್ನು ಸುಲಭವಾಗಿ ಮಾಡಿಬಿಡುವನು. ಪ್ರಾರಂಭದಲ್ಲಿ ಅರಿವೂ ಬುದ್ಧಿಯೂ ಚೆನ್ನಾಗೇ ಇದ್ದರೂ ರೋಗಿ ಚಿಂತೆಯಿಂದ ಖಿನ್ನನಾಗುತ್ತದೆ. ಈ ಬೇನೆಯನ್ನು ಮೊದಲು ವಿವರಿಸಿದವನು ಜೇಮ್ಸ್ ಪಾರ್ಕಿನ್ಸನ್ (1817).
	
ಸಾಮಾನ್ಯವಾಗಿ ವಯಸ್ಸಿಗೆ ಬಂದ ಮೇಲೆ ಈ ರೋಗ ಕಾಣಿಸಿಕೊಂಡರೂ ಮೂರನೆಯ ಹಂತದಲ್ಲೂ ತಲೆಹಾಕಬಹುದು. ಹೆಂಗಸರಿಗಿಂತ ಗಂಡಸರಲ್ಲಿ ಸಾಮಾನ್ಯ. ರೋಗದ ಲಕ್ಷಣಗಳು ಒಂದು ದಿನ ಇದ್ದಂತೆ ಇನ್ನೊಂದು ದಿನ ಇರವು. ಆದರೂ ಬೇರೂರಿರುವ ಈ ರೋಗ ಎಷ್ಟು ಚೆನ್ನಾಗಿ ತೋರುವುದೆಂದರೆ, ಒಂದು ಬಾರಿ ಸುಮ್ಮನೆ ನೋಡಿದರೂ ಗುರುತಿಸಬಹುದು. 10-20ವರ್ಷಗಳಲ್ಲಿ ಬಲಿಯುತ್ತದೆ. ಕೆಲವು ತಲೆಮಾರಿನವರಲ್ಲಿ ಒಬ್ಬರಿಗಿಂತಲೂ ಹೆಚ್ಚು ಮಂದಿಗೆ ಇದೇ ರೋಗ ಕಾಡಬಹುದು.
	
ನಿಜವಾದ ಕಾರಣ ತಿಳಿದಿಲ್ಲವಾದರೂ ಈಗ ಗೊತ್ತಿರುವಂತೆ, ಈ ಬೇನೆಗೆ ಮೂರು ಕಾರಣಗಳನ್ನು ಹೇಳಬಹುದು; ವಯಸ್ಸಾದವರಲ್ಲಿ ಮಿದುಳಿನ ತಳದ ನರಗಂಟುಗಳಿಗೆ ರಕ್ತ ಒದಗಿಸುವ ರಕ್ತನಾಳಗಳು ಪೆಡಸುಗಟ್ಟುವುದು; ಎಳೆಯರಲ್ಲಿ, ಈಗ ಬಹುಮಟ್ಟಿಗೆ ಮರೆತುಹೋಗಿರುವ ಮಿದುಳುರಿತಾನಂತರದ (ಪೋಸ್ಟ್-ಎಂಕೆಫಾಲಿಟಿಕ್) ವಿಷಕಣದ ಸೋಂಕು; ವಯಸ್ಸಿನ ಮಿತಿಯಿಲ್ಲದೆ, ಸರ್ಪಗಂಧ, ಫೀನೊತಯಜೀನಿನಂಥ ಮದ್ದುಗಳ ಸೇವನೆ. ಈ ಕಾರಣಗಳಲ್ಲಿ ಕೊನೆಯದನ್ನು ಮಾತ್ರ ಚೆನ್ನಾಗಿ ಗುಣಪಡಿಸಬಹುದು. ಏಕೆಂದರೆ, ಮದ್ದುಗಳ ಸೇವನೆ ನಿಂತರೆ, ರೋಗ ಲಕ್ಷಣಗಳು ಮರೆಯಾಗುತ್ತವೆ.
	
ಮೈಬಿಗಿತ, ನಡುಕಗಳ ಚಿಕಿತ್ಸೆಗಾಗಿ ಹಲವಾರು ಮದ್ದುಗಳಿವೆ. ಟ್ರೈಹೆಕ್ಸಿಫನಿಡಿಲ್ ಹೈಡ್ರೋಕ್ಲೋರೈಡ್, ಲಿವೋಡೋಪ, ಕಾರ್ಬಿಡೋಪ, ಅಮಾಂಟಿಡಿನ್ ಇತ್ಯಾದಿ. ವೈದ್ಯರ ಮಾರ್ಗದರ್ಶನದಲ್ಲಿ ಜೀವನಪರ್ಯಂತ ಔಷಧಿಯನ್ನು ಸೇವಿಸಬೇಕು. ರೋಗಿ ಆದಷ್ಟು ಸ್ವಾವಲಂಬಿಯಾಗಿ ಸಕ್ರಿಯವಾಗಿ ಕೆಲಸ ಮಾಡಲು ಪ್ರೋತ್ಸಾಹಿಸಬೇಕು. ಖಿನ್ನತೆ ತೀವ್ರವಾಗಿದ್ದರೆ ಖಿನ್ನತೆ ನಿವಾರಕ ಔಷಧಗಳೂ, ಆಪ್ತಸಮಾಲೋಚನೆಯೂ ಬೇಕಾಗಬಹುದು.
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ